ರಮ್ಯಕಾವ್ಯ
ಸು. 1920 ರಿಂದ 1950ರವರೆಗಿನ ಕನ್ನಡ ಕಾವ್ಯವನ್ನು `ರಮ್ಯಕಾವ್ಯ ಎಂದು (ರೊಮ್ಯಾಂಟಿಕ್) ನವ್ಯಪಂಥೀಯರು ಕರೆದರು. ಈ ಕಾವ್ಯಕ್ಕೆ ಆಂಗ್ಲ ರೊಮ್ಯಾಂಟಿಕ್ ಕಾವ್ಯದ ಪ್ರೇರಣೆಯಿದ್ದರೂ ಇದು ಅದರ ಅನುಕರಣವಲ್ಲ. ಆಂಗ್ಲಕಾವ್ಯದ ಪ್ರಭಾವವಿರುವುದು ಮುಖ್ಯವಾಗಿ ಅಭಿವ್ಯಕ್ತಿ ತಂತ್ರದಲ್ಲಿ ರೂಪಾಂಶದಲ್ಲಿ. ಆದ್ದರಿಂದಲೇ ಈ ಅವಧಿಯ ಕನ್ನಡ ಕಾವ್ಯವನ್ನು ಕುವೆಂಪು `ನವೋದಯ ಕಾವ್ಯವೆಂದು ಸಮುಚಿತವಾಗಿ ಹೆಸರಿಸಿದರು. ಈಗ ಆ ಹೆಸರೇ ರೂಢಿಗೆ ಬಂದಿದೆ.

ಆಂಗ್ಲರೊಮ್ಯಾಂಟಿಕ್ ಕಾವ್ಯ ತನಗಿಂತ ಹಿಂದಿನ ಕಾವ್ಯಕ್ಕೆ ಪ್ರತಿಭಟನೆಯಾಗಿ ಕಾಣಿಸಿಕೊಂಡದ್ದು. ಆದರೆ ಅದಕ್ಕಿಂತ ವಿಶಿಷ್ಟ ಹಿನ್ನಲೆ ಕನ್ನಡ ನವೋದಯ ಕಾವ್ಯಕ್ಕೆ ಇರಲಿಲ್ಲವಾದ್ದರಿಂದ ಇದು ಪರಂಪರೆಗೆ ಬೆನ್ನು ತಿರುಗಿಸದೇ ಬೆಳೆದು ಬಂತು; ಆಂಗ್ಲ ರೊಮ್ಯಾಂಟಿಕ್ ಕಾವ್ಯದೊಡನೆ ಕೆಲವು ಸಾಮ್ಯಗಳನ್ನುಳ್ಳದ್ದಾಗಿಯೂ ಅಧಿಕ ಆಯಾಮಗಳನ್ನು ಆರ್ಜಿಸಿತು. ರೊಮ್ಯಾಂಟಿಸಿಸಂ, ಕ್ಲಾಸಿಸಿಸಂ-ಇವೆರಡೂ ಭಿನ್ನವಾದ ಪ್ರವೃತ್ತಿಗಳು (ನಿಜವಾದ ವಿರೋಧವಿರುವುದು ರೊಮ್ಯಾಂಟಿಕ್‍ವಾದ, ದಾಸ್ತವವಾದಗಳ ನಡುವೆ), `ರೊಮ್ಯಾಂಟಿಕ್ ಶಬ್ದ ರೊಮಾನಿಕಾ ಭಾಷೆಯಿಂದ ನಿಷ್ಪನ್ನವಾದುದು. ರೊಮನಿಕಾ ಎಂಬುದು ರೋಮನ್ ಸಾಮ್ರಜ್ಯದಲ್ಲಿ ಅಧಿಕೃತ ಲ್ಯಾಟಿನ್ ಭಾಷೆಯೊಡನೆ ಬೆಳೆದುಬಂದ 8ನೆಯ ಶತಮಾನದ ಭಾಷೆಯೊಂದರ ಹೆಸರು. ಅದರ ಕ್ರಿಯಾವಿಶೇಷನದಿಂದ ರೊಮಾನ್ಸ್ ಎಂಬ ಹೆಸರು ಬಂತು. ರೊಮಾನ್ಸ್ ಎಂಬುದು ಮೊದಲು ಹಳೆಯ ಫ್ರೆಂಚ್ ಭಾಷೆಗೆ ಅನಂತರ ಇನ್ನಿತರ ಲ್ಯಾಟಿನ್ ಭಾಷೆಗಳಿಗೆ ಅನ್ವಯವಾಯಿತು. ಆಮೇಲೆ ಈ ಶಬ್ದ ಫ್ರೆಂಚ್ ಭಾಷೆಯೊಂದರ ಹೆಸರಾಗಿರುವುದರ ಬದಲು ಒಂದು ಬಗೆಯ ಸಾಹಿತ್ಯವನ್ನು ಕಾಲ್ಪನಿಕ ಕಥೆಗಳನ್ನು ಸೂಚಿಸುವಂತಾಯಿತು. ಇನ್ನೂ ಈಚೆಗೆ 17ನೆಯ ಶತಮಾನದಲ್ಲಿ ತನ್ನ ಕಾಲ್ಪನಿಕ ಸ್ವರೂಪದಿಂದಾಗಿ ಈ ಶಬ್ದಕ್ಕೆ ಭ್ರಮಕ ಮತ್ತು ಹುಸಿ ಎಂಬ ಅರ್ಥವುಂಟಾಯಿತು. ಈ ಹೀನಾರ್ಥಸಾಕಷ್ಟು ದೀರ್ಘಕಾಲ ಮುಂದುವರಿಯಿತು. 18 ನೆಯ ಶತಮಾನದಲ್ಲಿ ಈ ಶಬ್ದದ ಉತ್ತಮವಾದ ಅರ್ಥ ಬಳಕೆಗೆ ಬಂತು. ಅದು ಗಾಥಿಕ್ ಅವಶೇಷಗಳಿಗೂ ಅರಣ್ಯದೃಶ್ಯಗಳಿಗೂ ಭಯ-ಭವ್ಯತೆ, ವಿಷಾದ-ಸಾಹಸಗಳ ಇತರ ಆಹ್ಲಾದಕರ ಮಿಶ್ರಣಗಳಿಗೂ ಅನ್ವಯಿಸುವಂತಾಯಿತು. ಆಧುನಿಕಾರ್ಥದಲ್ಲಿ ರೊಮ್ಯಾಂಟಿಕ್ ಎಂಬ ಶಬ್ದ ಮೊಟ್ಟಮೊದಲು ಅನ್ವಯವಾದುದು ಜರ್ಮನಿಯಲ್ಲಿ.

ರೊಮ್ಯಾಂಟಿಕ್ ಪ್ರವೃತ್ತಿ ಒಂದು ವಿಶೇಷ ಚಿತ್ತವೃತ್ತಿ, ಜೀವನ ದೃಷ್ಟಿ ಮತ್ತು ಅನುಭವ ಪದ್ಧತಿ; ಅದರಲ್ಲಿ ಅಂತರ್ಮುಖತೆ ಅನುಭಾವಗಳಿಗೆ ಪ್ರಾಮುಖ್ಯ, ಸ್ವಾತಂತ್ರ್ಯದ ಮನೋಧರರ್ಮ ಮತ್ತು ನಿಸರ್ಗಕ್ಕೆ ಮರುಳುವಿಕೆ, ಆಂತರಿಕಾನುಭವವನ್ನು ಅವಲಂಬಿಸುವ ಪ್ರವೃತ್ತಿ, ಅದ್ಭುತದ ಪುನರುಜ್ಜೀವನ, ಕಿನ್ನರ ರೀತಿಯ ಬರವಣಿಗೆ, ಭಾಜೀವನದ ತೀವ್ರ ಪ್ರಾಧಾನ್ಯ, ಚಿಂತನೆಗೆ ಭಿನ್ನವಾದ ಭಾವನೆ ತುಂಬಿದ ಹೃದಯ-ಹೀಗೆ ಬಗೆಬಗೆಯಾಗಿ ರೊಮ್ಯಾಂಟಿಕ್ ಪ್ರವೃತ್ತಿಯನ್ನು ವರ್ಣಿಸಲಾಗಿದೆ. ಕಲ್ಪನೆ, ಧ್ವನಿಶಕ್ತಿ, ಅಸ್ಪಷ್ಟತೆ, ಇಂದ್ರಿಯಗಮ್ಯತೆ, ವಿಷಾದ, ಶಬ್ದಗಳ ಮಾಂತ್ರಿಕ ಬಳಕೆ, ಗೇಯತೆ, ಶ್ರೀಮಂತ ಪ್ರತಿಮಾವಳಿ, ಉದ್ಬೋಧನ ಶಕ್ತಿ, ಪರಿಪೂರ್ಣತೆ ಇವುಗಳನ್ನು ರೊಮ್ಯಾಂಟಿಕ್ ಗುಣಗಳೆನ್ನಲಾಗಿದೆ.

ಒಟ್ಟಿನಲ್ಲಿ ರೊಮ್ಯಾಂಟಿಕ್ ಎಂಬುದು ಎರಡು ಅರ್ಥದಲ್ಲಿ ಬಳಕೆಗೊಳ್ಳುತ್ತ ಬಂದಿದೆ : (1) ಒಂದು ನಿರ್ದಿಷ್ಟ ಕಾವ್ಯ ಚಳವಳಿ (2) ಸಾಹಿತ್ಯಚರಿತ್ರೆಯ ಬೆಳವಣಿಗೆಯ ಒಂದು ಘಟ್ಟ. ಎರಡನೆಯ ಅರ್ಥದಲ್ಲಿ ಅದು ಒಂದು ಮನೋಧರ್ಮವನ್ನು ಸೂಚಿಸುತ್ತದೆ. ಪ್ರಾಯಶಃ ಎಲ್ಲ ಸಾಹಿತ್ಯ ಕಲೆಗಳಲ್ಲೂ ಕಂಡುಬರುತ್ತದೆ.

ಇಂಗ್ಲೆಂಡಿನಲ್ಲಿ ರೊಮ್ಯಾಂಟಿಕ್ ಯುಗಕ್ಕೆ ಹಿಂದಿದ್ದ ನಿಯೋಕ್ಲಾಸಿಕ್ ಯುಗ ಬುದ್ಧಿಶಕ್ತಿಗೆ ಪಟ್ಟಕಟ್ಟಿತ್ತು. ವೈಜ್ಞಾನಿಕ ಮನೋಭಾವದ ಬೆಳವಣಿಗೆ ಇದಕ್ಕೆ ಕಾರಣ. ಮನುಷ್ಯ ಎಲ್ಲ ಜ್ಞಾನವನ್ನೂ ಬೌದ್ಧಿಕವಾಗಿಯೆ ಪಡೆಯುತ್ತಾನೆ ಎಂಬುದು ನಿಯೋಕ್ಲಾಸಿಕ್ ಯುಗದ ನಂಬಿಕೆಯಾಗಿತ್ತು. ಅದನ್ನು ರೊಮ್ಯಾಂಟಿಕ್ ಸಾಹಿತ್ಯ ಒಪ್ಪದೆ, ಇಂದ್ರಿಯಾನುಭವ ಮತ್ತು ಕಲ್ಪನೆಯ ಮೇಲೆ ಒತ್ತುಹಾಕಿತ್ತು; ಅನುಭಾವ, ದರ್ಶನಗಳಿಗೆ ಪ್ರಾಶಸ್ತ್ಯ ನೀಡಿತು.

ರೊಮ್ಯಾಂಟಿಕ್ ಯುಗಕ್ಕೆ ಹಿಂದಿನ ಸಾಹಿತ್ಯ ಇಂಗ್ಲೆಂಡಿನಲ್ಲಿ ತನ್ನ ಲಕ್ಷ್ಯವನ್ನು ನಗರವಾಸಿಗಳಿಗೆ ಶ್ರೀಮಂತರಿಗೆ ಸೀಮಿತಗೊಳಿಸಿತ್ತು, ಆದರೆ ರೊಮ್ಯಾಂಟಿಕ್ ಸಾಹಿತ್ಯ ಸಾಮಾನ್ಯ ಮನುಷ್ಯನ ವ್ಯಕ್ತಿತ್ವದ ಘನತೆಯನ್ನು ಗುರುತಿಸಿತು. 1799 ರಲ್ಲಿ ಘಟಿಸಿದ ಫ್ರಾನ್ಸಿನ ಮಹಾಕ್ರಾಂತಿ ಈ ದಿಶೆಯಲ್ಲಿ ಬೀರಿದ ಪ್ರಭಾವ ಗಣನೀಯವಾದುದು.

ಸಾಮಾನ್ಯ ಜನಜೀವನದಿಂದ ವಸ್ತುವನ್ನೆತ್ತಿಕೊಳ್ಳುವುದು, ಮಾನವನನ್ನು ಆಸಕ್ತಿಯ ಕೇಂದ್ರವಾಗಿ ಮಾಡಿಕೊಳ್ಳುವುದು, ನಿಸರ್ಗೋಪಾಸನೆ ಮುಂತಾದವು ಆಂಗ್ಲ ರೊಮ್ಯಾಂಟಿಕ್ ಕಾವ್ಯ, ಕನ್ನಡ ನವೋದಯಕಾವ್ಯ ಎರಡರಲ್ಲೂ ಗೋಚರಿಸುವ ಸಂಗತಿಗಳು. ಆದರೆ ಭಾರತೀಯ ಹಿನ್ನಲೆಯಲ್ಲಿ ಆಧ್ಯಾತ್ಮ ಅನುಭಾವಗಳನ್ನು ಸಹಜವಾಗಿಯೆ ಉಸಿರಾಡುವ ಕನ್ನಡ ನವೋದಯಕಾವ್ಯ `ರಮ್ಯ ದಾಚೆಗೂ ತನ್ನ ಪರಧಿಯನ್ನು ವಿಸ್ತರಿಸಿಕೊಂಡಿದೆ. ಅದರ ಹಿಂದೆ ಪಶ್ಚಿಮದ ಪ್ರೇರಣೆಗಳೆಂತೂ ಅಂತೇ ಸ್ವದೇಶಿ ಪ್ರೇರಣೆಗಳೂ ಇವೆ.
 (ಸಿ.ಪಿಕೆ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ